ವಚನ ಭಂಡಾರಿ ಶಾಂತರಸ ಶರಣರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

Loading

ಮಲವ ತೊಳೆಯಬಹುದಲ್ಲದೆ,
ಅಮಲವ ತೊಳೆಯಬಹುದೇ ಅಯ್ಯಾ?
ಮಾತನಾಡಬಹುದಲ್ಲದೆ, ಅಜಾತನನರಿಯಬಹುದೇ ಅಯ್ಯಾ?
ಮಾಟವ ಮಾಡಬಹುದಲ್ಲದೆ,
ಮರ್ಮದ ಕೂಟವ ಕೂಡಬಹುದೇ ಅಯ್ಯಾ?
ರಣದ ಪಂಥವ ಹೇಳಬಹುದಲ್ಲದೆ,
ಕಾದಬಹುದೇ ಅಯ್ಯಾ?
ಮಾತುಗಳ ಕೂಡಿ ಓತು ಹೇಳುವವರೆಲ್ಲರು,
ಉಮಾಕಾಂತನ ಬಲ್ಲರೆ?
ಈ ಮಾತಿನ ಮಾಲೆಗೆ ಅಂಜಿ,
ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-27/ವಚನ ಸಂಖ್ಯೆ-71)

ವಚನ ಭಂಡಾರಿ ಶಾಂತರಸರು 12 ನೇ ಶತಮಾನದ ವಚನ ಚಳವಳಿಯ ಪ್ರಮುಖ ಶಿವಶರಣರು ಹಾಗೂ ಬಸವಣ್ಣನವರ ಸಮಕಾಲೀನರು. ಅನುಭವ ಮಂಟಪದಲ್ಲಿ ನಡೆದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳನ್ನು ತಾಡೋಲೆಗಳಲ್ಲಿ ದಾಖಲಿಸಿ, ವಚನಗಳನ್ನು ಸಂಗ್ರಹಿಸಿ ಸಂರಕ್ಷಿಸಿದ ಕಾರಣ ಅವರಿಗೆ “ವಚನ ಭಂಡಾರಿ” ಎಂಬ ಗೌರವಾನ್ವಿತ ಬಿರುದು ಲಭಿಸಿದೆ. ಅನುಭವ ಮಂಟಪದ ಒಂದು ರೀತಿಯ ಗ್ರಂಥಪಾಲಕ ಮತ್ತು ಕರಣಿಕರಾಗಿ ಕಾರ್ಯನಿರ್ವಹಿಸಿದ ಅವರು ಶರಣರ ಅನುಭವ, ಚಿಂತನೆಗಳು ಮುಂದಿನ ಪೀಳಿಗೆಗೂ ತಲುಪುವಂತೆ ಮಾಡಿದ ಮಹತ್ತರ ಸೇವೆಯನ್ನು ಸಲ್ಲಿಸಿದರು. ಇಂದಿಗೂ ಲಭ್ಯವಿರುವ ಅನೇಕ ವಚನಗಳ ಸಂರಕ್ಷಣೆಯಲ್ಲಿ ಅವರ ಪಾತ್ರ ಅಪಾರವಾಗಿದೆ.

ವಚನ ಭಂಡಾರಿ ಶರಣ ಶಾಂತರಸರ ಅಂಕಿತನಾಮ “ಅಲೇಖನಾದ ಶೂನ್ಯ ಕಲ್ಲನೊಳಗಾದ” ಬಹಳ ವಿಶಿಷ್ಠವಾಗಿದೆ. ಬಯಲತತ್ವ ಸ್ವರೂಪವಾಗಿರುವ, ನಿರಾಕಾರನಾಗಿರುವ, ಸೀಮೆಯೇ ಇಲ್ಲದೆ ನಿಃಸೀಮನಾಗಿರುವ ಮತ್ತು ಶೂನ್ಯ ಸ್ವರೂಪದ ದ್ಯೋತಕವಾಗಿರುವ ದೇವರ ನಿಜಸ್ವರೂಪವನ್ನು ಬರಹದಿಂದ ವಿವರಿಸಲು ಸಾಧ್ಯವಿಲ್ಲ. ಅದು ಇಷ್ಟಲಿಂಗವೆಂಬ ಕುರುಹಿನೊಳಗೆ ಅಡಗಿರುವ ತತ್ವ. ಅದು  ಅನುಭವಿಸಬೇಕಾದ ಸತ್ಯ ಎನ್ನುವುದೇ ವಚನ ಭಂಡಾರಿ ಶರಣ ಶಾಂತರಸರ ವಚನಾಂಕಿತ “ಅಲೇಖನಾದ ಶೂನ್ಯ ಕಲ್ಲನೊಳಗಾದ” ಅಂಕಿತದ ಅರ್ಥ.

ಅವರ ವಚನಗಳಲ್ಲಿ ಶೂನ್ಯ ಸಂಪಾದನೆ, ಬಯಲು ತತ್ವ, ನಿರಾಕಾರ ಪರಬ್ರಹ್ಮದ ಅನುಭವ ಹಾಗೂ ಷಟ್‌ಸ್ಥಲ ತತ್ವಗಳ ಗಂಭೀರ ನಿರೂಪಣೆ ಕಂಡುಬರುತ್ತದೆ. ಅವರ ಪ್ರಮುಖ ಕೃತಿಗಳಲ್ಲಿ “ತೂರ್ಯ ನಿರಾಲಂಬ ಶರಣನ ಅರುಹಿನ ಷಟ್‌ಸ್ಥಲ ವಚನ” ವಿಶೇಷ ಸ್ಥಾನ ಪಡೆದಿದೆ. ವಚನಗಳನ್ನು ಕೇವಲ ಬರೆದು ಸಂಗ್ರಹಿಸಿದವರಷ್ಟೇ ಅಲ್ಲ, ಅವುಗಳ ಅಂತರಂಗದ ತತ್ವವನ್ನು ಆಳವಾಗಿ ಅನುಭವಿಸಿ ಅಭಿವ್ಯಕ್ತಿಸಿದ ಚಿಂತಕರಾಗಿಯೂ ಶಾಂತರಸರು ಪ್ರಸಿದ್ಧರಾಗಿದ್ದಾರೆ.

ಬಸವಾದಿ ಶರಣರ ಅಮೂಲ್ಯ ವಚನ ಸಂಪತ್ತನ್ನು ಉಳಿಸಿ, ವಚನ ಸಾಹಿತ್ಯದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಿದ ಮಹಾನ್ ಶರಣರಲ್ಲಿ ವಚನ ಭಂಡಾರಿ ಶಾಂತರಸರು ಅಗ್ರಗಣ್ಯರು. ಅವರ ಸೇವೆಯಿಂದಲೇ ವಚನ ಸಾಹಿತ್ಯದ ದೊಡ್ಡ ಭಾಗ ಇಂದು ನಮ್ಮ ಕೈ ಸೇರಿದೆ.

ಶಾಂತರಸರು ಈ ವಚನದಲ್ಲಿ ಬಹಳ ಸರಳವಾದ ಆದರೆ ಆಳವಾದ ಸತ್ಯವನ್ನು ಹೇಳುತ್ತಾರೆ. ಮಾತನಾಡುವುದು ಸುಲಭ, ಆದರೆ ಅದನ್ನು ಬದುಕಿನಲ್ಲಿ ಪಾಲಿಸುವುದು ಕಷ್ಟ ಎಂಬುದು ವಚನದ ಮುಖ್ಯ ಸಂದೇಶ.  ಮಾತು ಮತ್ತು ಆಚರಣೆ, ಜ್ಞಾನ ಮತ್ತು ಅನುಭವ, ಹೊರನೋಟ ಮತ್ತು ಒಳನೋಟಗಳ ನಡುವಿನ ವ್ಯತ್ಯಾಸವನ್ನು ಅತ್ಯಂತ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಅರಿವು ಎಂಬುದು ಬರಿ ಪುಸ್ತಕಗಳಿಂದಲಾಗಲಿ ಮಾತುಗಳಿಂದಲಾಗಲಿ ಸಿಗುವುದಿಲ್ಲ. ಅದು ಅನುಭವದಿಂದ ಮತ್ತು ಆತ್ಮಸಾಕ್ಷಾತ್ಕಾರದಿಂದ ಮಾತ್ರ ದೊರೆಯುತ್ತದೆ ಎಂಬುದು ವಚನದ ಮುಖ್ಯ ಸಂದೇಶ.

“ಮಲವ ತೊಳೆಯಬಹುದಲ್ಲದೆ, ಅಮಲವ ತೊಳೆಯಬಹುದೇ ಅಯ್ಯಾ?” ಮಲ ಎಂದರೆ ದೇಹದ ಕೊಳಕು. ಅದನ್ನು ನೀರಿನಿಂದ ತೊಳೆಯಬಹುದು. ಆದರೆ ಅಮಲ ಎಂದರೆ ಮನಸ್ಸಿನ ಅಜ್ಞಾನ, ಅಹಂಕಾರ, ಕಾಮ, ಕ್ರೋಧ, ಲೋಭ ಮೊದಲಾದ ಒಳಗಿನ ಕಲ್ಮಶಗಳು. ಇವುಗಳನ್ನು ಹೊರಗಿನ ನೀರಿನಿಂದ ತೊಳೆಯಲು ಸಾಧ್ಯವಿಲ್ಲ. ನಾವು ಪ್ರತಿದಿನ ಸ್ನಾನ ಮಾಡುವುದರಿಂದ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಆದರೆ ಮನಸ್ಸಿನಲ್ಲಿ ದ್ವೇಷ, ಅಸೂಯೆ ತುಂಬಿಕೊಂಡಿದ್ದರೆ ಅದನ್ನು ನೀರಿನಿಂದ ತೊಳೆಯಲಾಗದು. ನಿಜವಾದ ಅರ್ಥದಲ್ಲಿ ಶುದ್ಧರಾಗಲಾರರು. ಹಾಗಾಗಿ ಶಾಂತರಸರು ಇಲ್ಲಿ ದೇಹದ ಸ್ವಚ್ಛತೆಗಿಂತ ಮನಸ್ಸಿನ ಸ್ವಚ್ಛತೆ ಮುಖ್ಯ ಎಂದಿರುವರು.

“ಮಾತನಾಡಬಹುದಲ್ಲದೆ, ಅಜಾತನನರಿಯಬಹುದೇ ಅಯ್ಯಾ?” ದೇವರ ಬಗ್ಗೆ  ಗಂಟೆಗಟ್ಟಲೆ ಮಾತನಾಡುವುದು ಸುಲಭ. ಆದರೆ ದೇವರನ್ನು ನಿಜವಾಗಿ ಅರಿಯುವುದು ಅದು ಬೇರೆ ವಿಷಯವೆ ಸರಿ. ಕಬ್ಬಿನ ಸಿಹಿಯ ಬಗ್ಗೆ ಎಷ್ಟು ಕೇಳಿದರೂ ಅದರ ಸಿಹಿ ತಿಳಿಯುವುದಿಲ್ಲ. ಕಬ್ಬಿನ‌ ರಸವನ್ನು ‌ಕುಡಿದಾಗ ಮಾತ್ರ ಅದರ ಸಿಹಿ ಗೊತ್ತಾಗುತ್ತದೆ. ಹಾಗೆಯೇ ದೇವರ ಅನುಭವವೂ ಕೂಡ ಮಾತಿನಿಂದ ಅಲ್ಲ, ಅನುಭವದಿಂದ ಬರುತ್ತದೆ. ಆದರೆ ಅಜಾತ ಎಂದರೆ ಹುಟ್ಟು, ಸಾವಿಗೆ ಅತೀತನಾದ, ನಿಲುಕದವನಾದ ಪರಮಾತ್ಮ. ಆತನನ್ನು ಅರಿಯುವುದು ಕೇವಲ ಮಾತಿನಿಂದ ಸಾಧ್ಯವಿಲ್ಲ. ಈಗ ಸಂಗೀತದ ವಾದ್ಯ ವೀಣೆಯ ಬಗ್ಗೆ ಗಂಟೆಗಟ್ಟಲೆ ಮಾತನಾಡಬಹುದು. ಆದರೆ ವೀಣೆ ಕೈಯಲ್ಲಿ ಹಿಡಿದು ಮೀಟಿ ನುಡಿಸಿ ಸಾಧನೆ ಮಾಡಿದಾಗ ಮಾತ್ರ ಅದರ ಮಾಧುರ್ಯ‌, ನಾದದ ದೈವಸ್ವರೂಪ, ನಾದದ ವೈಭವದ ಅರಿವಾಗುವುದು. ಅನುಭವದಿಂದ ಮಾತ್ರ ಅರಿವು ಎಂಬುದು ಶಾಂತರಸರ ನಿರೂಪಣೆ.

“ಮಾಟವ ಮಾಡಬಹುದಲ್ಲದೆ, ಮರ್ಮದ ಕೂಟವ ಕೂಡಬಹುದೇ ಅಯ್ಯಾ?” ಮಾಟ ಎಂದರೆ ಚಾಣಾಕ್ಷತನದಿಂದ, ಬುದ್ದಿ ವಿವೇಕದಿಂದ, ಚತುರವಾಗಿ, ಆಕರ್ಷಿತವಾಗಿ ಮಾತನಾಡುವವರು ಸಮಾಜದಲ್ಲಿ ತುಂಬಾ ಜನ ಇರುತ್ತಾರೆ. ಆದರೆ ಜೀವನದ ನಿಜವಾದ ಅರ್ಥವನ್ನು ಆತ್ಮತತ್ವದ ರಹಸ್ಯವನ್ನು ಅರಿಯುವವರು, ಗ್ರಹಿಸಿದವರು ಕಡಿಮೆ. ವೈದ್ಯಕೀಯ ಪುಸ್ತಕಗಳನ್ನು ಓದಿದವನು ವೈದ್ಯನಾಗುವುದಿಲ್ಲ. ಅವನು ರೋಗಿಯ ನೋವನ್ನು ಕೂಲಂಕುಷವಾಗಿ ಅಭ್ಯಾಸಿಸಿ ಅರಿತು ಚಿಕಿತ್ಸೆ ನೀಡಿದಾಗ ಮಾತ್ರ ನಿಜವಾದ ವೈದ್ಯನಾಗುತ್ತಾನೆ. ಇನ್ನೂ ಸರಳವಾಗಿ ನೋಡುವುದಾದರೆ; ಒಬ್ಬ ರೈತನ ಕಷ್ಟದ ಬಗ್ಗೆ ಉದ್ದುದ್ದ ಭಾಷಣ ಮಾಡುವುದು ತುಂಬಾ ಸುಲಭ. ಆದರೆ ಹೊಲದಲ್ಲಿ ನಿಂತು ಒಂದು ದಿನ ದುಡಿಯುವುದು ಕಷ್ಟ. ಆ ಕಷ್ಟವನ್ನು ಅರಿವುದೇ ಜೀವನದ ಮರ್ಮ.

“ರಣದ ಪಂಥವ ಹೇಳಬಹುದಲ್ಲದೆ, ಕಾದಬಹುದೇ ಅಯ್ಯಾ?” ಯುದ್ಧದ ಬಗ್ಗೆ ಮಾತನಾಡುವುದು ಸುಲಭ. ಆದರೆ ರಣರಂಗದಲ್ಲಿ ನಿಂತು ಹೋರಾಡುವುದು ಕಷ್ಟ. ಇಂದಿನ ಜೀವನದಲ್ಲಿಯೂ ಇದೇ ಸತ್ಯ. ಇತರರಿಗೆ ಸಲಹೆ ಕೊಡುವವರು ಹಲವರು. ಆದರೆ ತಮ್ಮ ಜೀವನದಲ್ಲಿ ಅದನ್ನು ಅನುಸರಿಸುವವರು ಕಡಿಮೆ. ಪರೀಕ್ಷೆಗೆ ಹೇಗೆ ಓದಬೇಕು ಎಂದು ಸಲಹೆ ಕೊಡುವವರು ಹಲವರು. ಆದರೆ ತಾವೇ ಕಷ್ಟಪಟ್ಟು ಓದಿ ಯಶಸ್ಸು ಸಾಧಿಸುವವರು ಕೆಲವರು ಮಾತ್ರ.

“ಮಾತುಗಳ ಕೂಡಿ ಓತು ಹೇಳುವವರೆಲ್ಲರೂ, ಉಮಾಕಾಂತನ ಬಲ್ಲರೆ?” ಶಾಸ್ತ್ರ, ಪುರಾಣ, ವಚನ, ವೇದ ಎಲ್ಲವನ್ನೂ ಓದಿದವರು ದೇವರನ್ನು ಅರಿತವರೇ ಆಗಬೇಕೆಂದಿಲ್ಲ. ಓದಿದ ಜ್ಞಾನ ಬದುಕಿನಲ್ಲಿ ಕಾಣಬೇಕು. ಇಲ್ಲದಿದ್ದರೆ ಅದು ಪುಸ್ತಕದಲ್ಲೇ ಉಳಿಯುತ್ತದೆ. ಜ್ಞಾನವು ನಾಲಿಗೆಯಲ್ಲಲ್ಲ, ಹೃದಯದಲ್ಲಿರಬೇಕು ಎಂಬುದನ್ನು ಸರಳವಾಗಿ ವ್ಯಾಖ್ಯಾನಿಸಿದ್ಧಾರೆ. ಇದೇ ವಿಚಾರವನ್ನು ಬಸವಣ್ಣನವರು ಹೀಗೆ ಹೇಳುತ್ತಾರೆ:

ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು.
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-224/ವಚನ ಸಂಖ್ಯೆ-803)

“ಈ ಮಾತಿನ ಮಾತಿಗೆ ಅಂಜಿ, ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ.” ಅಲೇಖ ಎಂದರೆ ವರ್ಣಿಸಲಾಗದ, ಮಾತುಗಳಿಗೆ ಹಾಗೂ ಶಬ್ದಗಳಿಗೆ ಸಿಗಲಾರದ ಎಂಬರ್ಥ. ಶೂನ್ಯ ಎಂದರೆ ಎಲ್ಲವನ್ನೂ ಒಳಗೊಂಡಿರುವ ಪರಬ್ರಹ್ಮದ ಸ್ಥಿತಿ. ಅಂತಹ ಪರಮ ಸತ್ಯವನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ ಅದನ್ನು ಅನುಭವಿಸಬೇಕಷ್ಟೇ ಎಂದು ಶರಣ ಶಾಮತರಸರು ವಿನಮ್ರವಾಗಿ ಹೇಳುತ್ತಾರೆ.

ವಚನದಲ್ಲಿ ಆಚರಣೆಯೇ ಮುಖ್ಯ, ಜೊತೆಗೆ ಜೀವನದಲ್ಲಿ ಮಾತಿಗಿಂತ ಕರ್ಮಕ್ಕೆ ಬೆಲೆ ಜಾಸ್ತಿ ಎನುವ ಅರಿವಾಗುತ್ತದೆ. ಅನುಭವ ಜ್ಞಾನವೇ ನಿಜವಾದ ಜ್ಞಾನ, ಪುಸ್ತಕದ ಜ್ಞಾನ ಒಂದು ಹಂತದವರೆಗೆ ಸರಿ. ಆದರೆ ಅನುಭವದ ಜ್ಞಾನ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ದೇವರು ಅನುಭವದ ವಿಷಯ. ದೇವರನ್ನು ವಾದದಿಂದಲ್ಲ, ಭಕ್ತಿಯಿಂದ ಮತ್ತು ಸಾಧನೆಯ ಅನುಭವದಿಂದ ಮಾತ್ರ  ಅರಿಯಬಹುದು ಎನ್ನುವ ಅಂಶಗಳನ್ನು ಶರಣ ಶಾಂತರಸರು ಸ್ಪಷ್ಟವಾಗಿ ತಿಳಿಸಿದ್ಧಾರೆ.

ವಚನ ಭಂಡಾರಿ ಶರಣ ಶಾಂತರಸರು ಇಲ್ಲಿ 4 ಹೋಲಿಕೆಗಳನ್ನು ಮಾಡುತ್ತಾರೆ.

  • ಮೊದಲನೆಯದು, ಹೊರಗಿನ ಕೆಲಸ, ಒಳಗಿನ ಸಾಧನೆ. ಅಂದರೆ ಬರಿ ದೇಹ ತೊಳೆಯುವುದು, ಮನಸ್ಸು ಶುದ್ಧಗೊಳಿಸುವುದು ಬೇರೆ.
  • ಎರಡನೇಯದು ಕೇವಲ ಮಾತನಾಡುವುದು ಬೇರೆ, ಅರಿತುಕೊಳ್ಳುವುದು ಬೇರೆ.
  • ಮೂರನೆಯದಾಗಿ ಆಕರ್ಷಿಸಿ ಬುದ್ದಿಂವತಿಕೆಯಿಂದ ಮಾತಾಡುವುದು ಬೇರೆ, ಜೀವನದ ಮರ್ಮ ತಿಳಿಯುವುದು ಬೇರೆ.
  • ನಾಲ್ಕನೇಯದು ಯುದ್ಧದ ಬಗ್ಗೆ ಹೇಳುವುದು ಬೇರೆ, ಸ್ವತಃ ಯುದ್ಧಮಾಡುವುದು ಬೇರೆ.

ಹಾಗಾಗಿ ಇವುಗಳ ಮೂಲಕ “ಹೇಳುವುದು ಬೇರೆ, ಮಾಡುವುದು ಬೇರೆ” ಎಂಬ ಸತ್ಯವನ್ನು ತಿಳಿಸುತ್ತಾರೆ. ಇಂದಿನ ಸಮಾಜದಲ್ಲಿ ಇಂತಹ ಹತ್ತು ಹಲವು ಪ್ರಸಂಗಗಳನ್ನು ನೋಡಬಹುದು. ಎಷ್ಟೋ ಬಾರಿ ಕೆಲವರು ಪ್ರಾಮಾಣಿಕತೆ ಬಗ್ಗೆ ಉಪದೇಶ ಮಾಡುತ್ತಾರೆ, ಆದರೆ ಕೆಲವೊಮ್ಮೆ ತಾವೇ ಅಪ್ರಾಮಾಣಿಕರಾಗಿರುತ್ತಾರೆ. ಪರಿಸರ ಕಾಳಜಿ ಬಗ್ಗೆ ಘಂಟಘೋಷವಾಗಿ ಪರಿಸರ ಉಳಿಸೋಣ ಎನ್ನುವ ಭಾಷಣ ಮಾಡ್ತಾರೆ. ಅವರೆ ಪ್ಲಾಸ್ಟಿಕ್ ಬಳಕೆ ಬಿಡದೆ ಯಥೇಚ್ಛವಾಗಿ ಉಪಯೋಗಿಸುತ್ತಾರೆ. ಭಕ್ತಿ ಬಗ್ಗೆ ಮಾತನಾಡುವವರೆ  ಮಾನವೀಯತೆಯನ್ನು ಮರೆತು ಬಿಟ್ಟಿರುತ್ತಾರೆ. ನೀತಿ ಹೇಳುವವರು ತಮ್ಮ ಜೀವನದಲ್ಲಿ ನೀತಿಯನ್ನೇ ಪಾಲಿಸುವುದಿಲ್ಲ.

ಈ ವಚನದ ದೊಡ್ಡ ಶಕ್ತಿ ಅದರ ಸರಳತೆ. ಶಾಂತರಸರು ಇಲ್ಲಿ ಯಾರನ್ನೂ ನೇರವಾಗಿ ಟೀಕಿಸುವುದಿಲ್ಲ. ಆದರೆ ಪ್ರಶ್ನೆಗಳ ಮೂಲಕ ನಮ್ಮ ಮನಸ್ಸನ್ನು ಎಚ್ಚರಿಸುತ್ತಾರೆ.

  • ನಾನು ಹೇಳುವುದನ್ನು ನಾನೇ ಮಾಡುತ್ತಿದ್ದೇನೆಯೇ?
  • ನನ್ನ ಭಕ್ತಿ ಕೇವಲ ಮಾತಿನಲ್ಲೇ ಇದೆಯೇ?
  • ನನ್ನ ಜ್ಞಾನ ಬದುಕಿನಲ್ಲಿ ಕಾಣಿಸುತ್ತಿದೆಯೇ?

ಎಂಬ ಪ್ರಶ್ನೆಗಳನ್ನು ಪ್ರತಿಯೊಬ್ಬರ ಮುಂದಿಡುತ್ತಾರೆ. ಜ್ಞಾನವನ್ನು ಅವರು ತಿರಸ್ಕರಿಸುವುದಿಲ್ಲ. ಆದರೆ ಅನುಭವವಿಲ್ಲದ ಜ್ಞಾನ ಅಪೂರ್ಣ ಎಂದು ಎಚ್ಚರಿಸುತ್ತಾರೆ. ಮಾತಿನ ಆರ್ಭಟ, ಪಾಂಡಿತ್ಯದ ಪ್ರದರ್ಶನ ಮತ್ತು ಆಚರಣೆಯ ಕೊರತೆ ಇರುವ ಸಮಾಜಕ್ಕೆ ಇದು ಕನ್ನಡಿಯಂತೆ ನಿಲ್ಲುವ ವಚನ.

ಶಾಂತರಸರ ವಚನ ನಮಗೆ ಬರಿ ಧಾರ್ಮಿಕ ಸಂದೇಶವಲ್ಲ. ನಮ್ಮನ್ನು ಆತ್ಮಾವಲೋಕನಕ್ಕೆ ಕರೆದೊಯ್ಯುವ ಜೀವನ ದರ್ಶನವಾಗಿದೆ. ತಿಳಿದಿರುವುದು ಮುಖ್ಯವಲ್ಲ, ಬದುಕಿರುವುದು ಮುಖ್ಯ ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ. ಮಾತು ಮತ್ತು ಕೃತಿಯ ಏಕತೆಯೇ ಆಧ್ಯಾತ್ಮಿಕತೆಯ ನಿಜವಾದ ಅಳತೆ ಎಂಬ ಮಹತ್ತರ ಸತ್ಯವನ್ನು ಸಾರುತ್ತದೆ.

ಶಾಂತರಸರ ಈ  ವಚನವನ್ನು ಮತ್ತೊಮ್ಮೆ ಅವಲೋಕಿಸಿದಾಗ ನಮಗೆ “ಮಾತಿಗಿಂತ ಆಚರಣೆ ದೊಡ್ಡದು. ಓದಿಗಿಂತ ಅನುಭವ ದೊಡ್ಡದು. ಉಪದೇಶಕ್ಕಿಂತ ಬದುಕು ದೊಡ್ಡದು.”  ಎನುವುದಾಗಿದೆ. ಮನುಷ್ಯನು ಇತರರನ್ನು ಬದಲಾಯಿಸುವ ಮೊದಲು ತನ್ನ ಮನಸ್ಸನ್ನು ಶುದ್ಧಗೊಳಿಸಬೇಕು ಎಂದು ಅತ್ಯಂತ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ತಿಳಿಸುತ್ತದೆ.

ಶ್ರೀಮತಿ. ಶಾಲಿನಿ ರುದ್ರಮುನಿ,
# 20, ರಾಜೀವನಗರ, ಎರಡನೇ ಹಂತ, ಎರಡನೇ ತಿರುವು, 
ಪೋಲಿಸ್ ವಸತಿಗೃಹ ರಸ್ತೆ, 
ವಿದ್ಯಾನಗರ,
ಹುಬ್ಬಳ್ಳಿ – 580031
ಮೊಬೈಲ್ ಸಂಖ್ಯೆ – 78921 69644

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 97413 57132
    • e-Mail ID: info@vachanamandara.in / admin@vachanamandara.in

Leave a Reply