ಶರಣೆ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮನವರು | ಡಾ. ಎಂ. ಮಕ್ತುಂಬಿ, ಭಾಲ್ಕಿ.

Loading

೧೨ ನೇ ಶತಮಾನದಲ್ಲಿ ಅನೇಕ ಶಿವಶರಣರು ಬಾಳಿ ಬದುಕಿದ್ದಾರೆ. ಅವರು ತಮ್ಮ ವಚನಗಳ ಮೂಲಕ ಪರಿಚಯಿಸಿಕೊಂಡವರು. ಸ್ವಂತ ಪರಿಶ್ರಮದಿಂದ ಸಾಹಿತ್ಯವನ್ನು ಕಟ್ಟಿಕೊಟ್ಟವರು. ಭಕ್ತಿ, ಪೂಜೆ, ಕಾಯಕ, ದಾಹೋಸ, ಸಮೂಹ ಪ್ರಾರ್ಥನೆ, ಸಂವಾದ, ಮಾಡುವದರ ಮೂಲಕ ಜೀವ ಮತ್ತು ಜೀವನವನ್ನು ಕಟ್ಟಿಕೊಂಡುವರು. ಅಂತವರಲ್ಲಿ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಹಡಪದ ಲಿಂಗಮ್ಮ ಶರಣೆಯು ಒಬ್ಬರು. ಅವರು ೧೧೪ ವಚನಗಳನ್ನು ಬರೆದಿದ್ದಾರೆ. ಬಸವಣ್ಣನವರಿಗೆ ಈ ದಂಪತಿಗಳು ಆಪ್ತರಾಗಿದ್ದರು. “ಗುರುರಾಜ ಚರಿತ್ರೆ” ಯಲ್ಲಿ ಬರುವ “ಚಾರು ಗುರು ಭಕ್ತಿ ಲಿಂಗಮ್ಮ” ಎಂಬ ಉಲ್ಲೇಖವಿದೆ. ಅವರು ತಮ್ಮ 11 ವಚನಗಳಲ್ಲಿ ಅವರ ಗುರು ಚೆನ್ನಮಲ್ಲೇಶ್ವರನ್ನು ನೆನೆದಿದ್ದಾರೆ.

ಎನ್ನ ಸತ್ಯಳ ಮಾಡಿ ನಿತ್ಯವ ತೋರಿ,
ತತ್ವವೆಂಬುದನರುಹಿದಿರಿ; ಮತ್ಸರವ ಹಿಂಗಿಸಿದಿರಿ
ಆಸೆರೋಷವನೆ ಹಿಂಗಿಸಿದಿರಿ;
ಮಾತು ಮಥನವನೆ ಕೆಡಿಸಿದಿರಿ.
ವ್ಯಾಕುಳವನೆ ಕೆಡಿಸಿ, ಜ್ಯೋತಿಯ ಬೆಳಗನೆ ತೋರಿದನಯ್ಯಾ
ಚೆನ್ನಮಲ್ಲೇಶ್ವರನು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-489/ವಚನ ಸಂಖ್ಯೆ-1325)

ಅವರ ಒಂದು ವಚನದಲ್ಲಿ ಶರಣ ಹಡಪದಪ್ಪಣ್ಣನವರು ಚೆನ್ನಮಲ್ಲೇಶ್ವರರನ್ನು ಉಲ್ಲೇಖಿಸಿದ್ದಾರೆ.

ಅವರನಕ ಕೂಳ ಇಡಿದ ಒಡಲಿಗೆ,
ಅರೆದು ಕುದಿದು, ಕೋಟಲೆಗೊಂಬುತಿದ್ದರು.
ಈ ಹದನನರಿಯದೆ ಕೆಡುತ್ತಿದ್ದೆಯಲ್ಲಾ ಎಂದು ತುದಿ ಹಿಡಿದು,
ತೆಗೆದುಕೊಂಡಾತ ಚೆನ್ನಮಲ್ಲೇಶ್ವರನಯ್ಯ.
ಆ ಒಡಲಗುಣದ ಕೆಡಿಸುವುದಕ್ಕೆ ಪ್ರಸಾದವೆಂಬ ಮದ್ದನಿಕ್ಕಿ.
ಸಲಹಿದಾತ ಚೆನ್ನಮಲ್ಲೇಶ್ವರನಯ್ಯ.
ಅಂಗಕ್ಕೆ ಆಚಾರ, ಮನಸ್ಸಿಗೆ ಅರುಹು,
ಕಂಗಳಿಗೆ ಲಿಂಗವ ತೋರಿದಾತ ಚೆನ್ನಮಲ್ಲೇಶ್ವರನಯ್ಯ.
ಇಂತು ಎನ್ನ ಭವವ ಕೊಂದಿಹೆನೆಂದು
ಗುರುಲಿಂಗಜಂಗಮ ಈ ತ್ರಿವಿಧವಾಗಿಯು
ಸುಳಿದಾತ ಚೆನ್ನಮಲ್ಲೇಶ್ವರನಯ್ಯ.
ಇಂತಪ್ಪ ಚೆನ್ನಮಲ್ಲೇಶ್ವರನ ಶ್ರೀಪಾದವಿಡಿದು
ಕೆಟ್ಟು ಬಟ್ಟಬಯಲಾದೆನಯ್ಯ.
ಬಸವಪ್ರಿಯ ಚೆನ್ನಮಲ್ಲೇಶ್ವರನ ಪಾದವ ಮುಟ್ಟಿ,
ಹುಟ್ಟುಗೆಟ್ಟುಹೋದೆನಯ್ಯ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-354/ವಚನ ಸಂಖ್ಯೆ-874)

“ಗುರುಲಿಂಗಜಂಗಮ ಈ ತ್ರಿವಿಧವಾಗಿಯು ಸುಳಿದಾತ ಚೆನ್ನಮಲ್ಲೇಶ್ವರನಯ್ಯ” ಎಂದು ಹೇಳಿಕೊಂಡಿದ್ದಾರೆ. ಅವರ ೧2 ವಚನಗಳಲ್ಲಿ ಚೆನ್ನಮಲ್ಲೇಶ್ವರರನ್ನು ನೆನೆದಿರುವದು ಕಂಡು ಬಂದಿದೆ. ಅಲ್ಲಿ ಅವರ ಗುರುಭಕ್ತಿಯನ್ನು ಕಾಣತ್ತೇವೆ. ಜಾತಿಯ ಜಾಲದಲ್ಲಿ ಹುಟ್ಟಿದ ಲಿಂಗಮ್ಮ ಅವರು  ಶರಣರ ಒಡನಾಟದಿಂದ ಜಾತಿಯ ಸೂತಕವನ್ನು ಕಳೆದುಕೊಂಡರು. ಶರಣರು ಸತ್ಯವಂತರು. ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ಹೇಳುತ್ತಿದ್ದರು. ಲಿಂಗಮ್ಮ ಶರಣೆಯು ಸತ್ಯವನ್ನು ಹೇಳುವಲ್ಲಿ ಸೋಲಲಿಲ್ಲ. ಪ್ರಾಮಾಣಿಕವಾಗಿ ಜಾತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಮಹಾಬೆಳಗ ನೋಡಿ ಮನವ ನಿಮ್ಮ ವಶವ ಮಾಡಿ,
ತನುವ ಮರೆದು ಧನವ ಜಂಗಮಕಿತ್ತು,
ತಾನು ಬಯಲದೇಹಿಯಾದಲ್ಲದೆ
ನಿಜಮುಕ್ತಿ ಇಲ್ಲವೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-458/ವಚನ ಸಂಖ್ಯೆ-1252)

ಈ ವಚನದಲ್ಲಿ ಮಹಾಬೆಳಗು ಅಂದರೆ ಪರಮಾತ್ಮ. ಅವರನ್ನು ಹಾಡಿ ಹೊಗಳಿದ್ದಾರೆ. ಎಲ್ಲವನ್ನು ನಿಮ್ಮ ವಶಕ್ಕೆ ನೀಡುವೆ. ನಿಮ್ಮನ್ನು ನೆನೆಯುತ್ತ, ಆರಾಧಕಳಾಗುವೆ. ತನ್ಮಯತೆಯಲ್ಲಿ ಪೂಜಿಸುವೆ. ಜಂಗಮರಿಗೆ ಧನವನ್ನು ಅರ್ಪಿಸುವೆ. ಲೌಕಿಕ ಜೀವನವನ್ನು ನೆಮ್ಮದಿಯಿಂದ ನಿಮ್ಮಗೆ ಒಪ್ಪಿಸುವೆ. ಆಗ ಮಾತ್ರ ನನಗೆ ನಿಜವಾದಂಥ ಮುಕ್ತಿ ದೊರೆಯಲು ಸಾಧ್ಯ. ಇಲ್ಲದಿದ್ದರೆ ಮುಕ್ತಿ ದೊರೆಯುವುದಿಲ್ಲವೆಂದು ಶರಣೆ ಹಡಪದ ಲಿಂಗಮ್ಮನವರು ಹೇಳಿದ್ದರೆ. ಅವರ ವಚನದ ಅಂಕಿತನಾಮ “ಅಪ್ಪಣ್ಣಪ್ರಿಯ ಚೆನ್ನಬಸವಣ್ಣ” ಎಂದಾಗಿದೆ. ಲಿಂಗಮ್ಮನವರ ಬಗ್ಗೆ ವೈಯಕ್ತಿಕ ಮಾಹಿತಿ ದೊರಕಿಲ್ಲ. ಅವರ ಬಗ್ಗೆ  ವಚನಗಳ ಮೂಲಕ ತಿಳಿದುಕೊಳ್ಳಲು ಸಾಧ್ಯವಾಯಿತು. ಅವರ ಒಂದು ಮಂತ್ರ ಗೋಪ್ಯ ಹಾಗೂ ಒಂದು ಸ್ವರವಚನ ಸದ್ಯ ದೊರೆತ ಕೃತಿಗಳು. ಅವರ ವಚನಗಳನ್ನು “ಲಿಂಗಮ್ಮನವರ ಬೋಧೆಯ ವಚನಗಳು” ಎಂದು ಕರೆಯಲಾಗುತ್ತದೆ. ತತ್ವಬೋಧೆಯೇ ಅವುಗಳ ಮುಖ್ಯ ಉದ್ದೇಶ.

ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ,
ಸತ್ಯಶರಣರ ಪಾದವಿಡಿದೆ.
ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಇಂತಿವರ ಕಂಡೆನ್ನ ಕಂಗಳಮುಂದಣ ಕತ್ತಲೆ ಹರಿಯಿತ್ತು.
ಕಂಗಳಮುಂದಣ ಕತ್ತಲೆ ಹರಿಯಲೊಡನೆ,
ಮಂಗಳದ ಮಹಾಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-477/ವಚನ ಸಂಖ್ಯೆ-1296)

ಲಿಂಗಮ್ಮನವರ ಕುಲವನ್ನು ಕೀಳಾಗಿ ನೋಡುವ ಜನ ಆಗಿನ ಕಾಲದಲ್ಲಿಯೂ ಇದ್ದರು. ಕುಲ ಯಾವುದಾದರೆನು? ನಾನು ಸಜ್ಜನರ ಸಂಗವನ್ನು ಮಾಡಿದೆ. ಅದರಿಂದ ನನ್ನೊಳಗೆ ಉತ್ತಮವಾದ ಗುಣಗಳು ಬಂದವು. ಸಜ್ಜನರ ಸಂಗ ಮಾಡಬೇಕೆಂದಿದ್ದಾರೆ ಲಿಂಗಮ್ಮನವರು. ಸತ್ಯ ನುಡಿದು ಶರಣರ ಪಾದವಿಡಿಯಬೇಕು. ಪಾದವಿಡಿದು ಗುರು ಕರುಣೆ ಪಡೆಯಬೇಕು. ಶುದ್ಧ ಮನಸ್ಸಿನಿಂದ ಲಿಂಗ ಕಾಣಬೇಕು. ಅಂದರೆ ಪರಮಾತ್ಮನ ಕಾಣಬೇಕು. ಜಂಗಮರ ಸಂಗ ಮಾಡಬೇಕು. ಪಾದೋದಕ ಕಾಣಬೇಕು. ಕಣ್ಣ ಮುಂದೆ ಇರುವ ಅಂಧಕಾರವನ್ನು ಹೋಗಲಾಡಿಬೇಕು.ಅರಿವಿನ ದೀಪ ಅಚ್ಚಬೇಕೆಂದರು.

ಅಯ್ಯಾ, ಈ ಮಹಾಘನವ ಕಾಂಬುದಕ್ಕೆ
ಹಸಿವು ಕೆಡಬೇಕು, ತೃಷೆಯಡಗಬೇಕು, ವ್ಯಸನ ನಿಲ್ಲಬೇಕು;
ನಿದ್ರೆ ಹರಿಯಬೇಕು, ಜೀವನ ಬುದ್ಧಿ ಹಿಂಗಬೇಕು,
ಮನ ಪವನ ಬಿಂದು ಒಡಗೂಡಬೇಕು,
ಚಿತ್ತ ಒತ್ತಟ್ಟಿಗೆ ಹೋಗದಿರಬೇಕು.
ಹೊತ್ತು ಹೊತ್ತಿಗೆ ಉತ್ತರವನೇರಿ ಬೆಚ್ಚು ಬೇರಿಲ್ಲದೆ
ಲಿಂಗದೊಳಗೆ ಅಚ್ಚೊತ್ತಿದಂತೆ ಬೆರೆದಡೆ,
ಕತ್ತಲೆ ಹರಿವುದು, ಮರವೆ ಹಿಂಗುವುದು, ನಿದ್ರೆ ಹರಿವುದು,
ಹಸಿವು ಕೆಡವುದು, ತೃಷೆಯಡಗುವುದು, ವ್ಯಸನ ನಿಲುವುದು.
ಇವೆಲ್ಲವನು ಹಿಂಗಿಸಿ ತಾ ಲಿಂಗವ್ಯಸನಿಯಾಗಬಲ್ಲಡೆ,
ಮುಂದೆ ಮಹಾಮಂಗಳದ ಬೆಳಗು ಕಾಣಿಪುದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-462/ವಚನ ಸಂಖ್ಯೆ-1263)

ಪರಮಾತ್ಮನನ್ನು ಕಾಣುವುದಕ್ಕೆ ಹಸಿವು, ಬಾಯಾರಿಕೆ, ಚಟಗಳು, ನಿದ್ರೆ, ಜೀವನದ ಕೆಟ್ಟ ಬುದ್ದಿ ಹಿಂಗಬೇಕು, ಮನವು ಪವನ ಬಿಂದುವಿನಂತೆ ಪರಿಶುದ್ಧವಾಗಬೇಕು. ಮನಸ್ಸು ಮತ್ತು ಬುದ್ದಿ ಸಮ ಪ್ರಮಾಣದಲ್ಲಿ ಸಾಗಬೇಕು. ಸಮಯ ಕಳೆದಂತೆ ಲಿಂಗದಲ್ಲಿ ತಲ್ಲಿನರಾಗಬೇಕು. ಆಗ ಮಾನವನ ಎಲ್ಲ ಗುಣಗಳು ಅಳಿದು, ಆನಂದ ಅನುಭವವನ್ನು ಪಡೆದುಕೊಳ್ಳಬೇಕು. ಆಗ ಮುಂದೆ ಮಹಾಮಂಗಳ ಬೆಳಗುವ ಬೆಳಕನ್ನು ಕಾಣುತ್ತೆವೆ. ಎಂದು ಲಿಂಗಮ್ಮ ಶರಣೆ ಈ ವಚನದಲ್ಲಿ ಹೇಳಿದ್ದಾರೆ.

ಅಂಗವೆಂದಡೆ ಲಿಂಗದೊಳಡಗಿತ್ತು.
ಲಿಂಗವೆಂದಡೆ ಅಂಗದೊಳಡಗಿತ್ತು.
ಅಂಗದೊಳಡಗಿದ ಲಿಂಗವನೆ
ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ,
ಮಂಗಳದ ಮಹಾಬೆಳಗು ಕಾಣಿಸಿತ್ತು.
ಇಂತಪ್ಪ ಮಂಗಳದ ಮಹಾಬೆಳಗ
ತೋರಿದ ಶರಣರಂಘ್ರಿಗೆರಗಿ
ಸುಖಿಯಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-465/ವಚನ ಸಂಖ್ಯೆ-1271)

ಶರೀರ ಮತ್ತು ಲಿಂಗ ಇವೆರಡು ಒಂದಾಗಬೇಕು. ಬೇರೆ ಬೇರೆ ಅಲ್ಲ. ಅಂಗದೊಳಗೆ ಲಿಂಗ, ಲಿಂಗದೊಳಗೆ ಅಂಗ ಸೇರಿ ಇವು ಬೇರೆ ಅಲ್ಲ ಅನ್ನಿಸಬೇಕು. ಒಂದು ನಾಣ್ಯದ ಎರಡು ಮುಖಗಳಂತೆ. ದೇಹದ ಎರಡು ಕಣ್ಣುಗಳಂತೆ ಇರಬೇಕು. ಮತ್ತೆ ಹಾಲು ನೀರು ಬೆರೆತಂತೆ. ಒಂದರಲ್ಲಿ ಇನ್ನೋಂದು ಕಾಣುವಂತೆ ಅಂದರೆ ಜೀವನ ಎರಡಲ್ಲ ಒಂದೇ ಅನ್ನಿಸಬೇಕು. ಆಗಲೇ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಳಬೇಕು. ಸತ್‌ಸಂಗದ ಪಾತ್ರವು ಅಷ್ಟೇ ಮಹತ್ವದಾಗಿದೆ. ಆಗ ಮಾತ್ರ ಸುಖಿಯಾಗಿರಲು ಸಾಧ್ಯವಾಯಿತೆಂದು ಲಿಂಗಮ್ಮ ಶರಣೆ ಹೇಳಿಕೊಂಡಿದ್ದಾರೆ.

ಲಿಂಗಮ್ಮನಂಥತವರಿಗೆ ಅಧ್ಯಾತ್ಮ ಎಂಬುದು ತೊಡಕಾಗಿತ್ತು. ಸರಳವಾಗಿ ದಕ್ಕಿಸಿಕೊಳ್ಳುವ ಸಾಧನವಾಗಿರಲ್ಲಿಲ್ಲ. ಜ್ಞಾನದ ಅರಿವು ದೊರೆತಾಗ ಆಶ್ಚರ್ಯ, ಆನಂದ, ದಿಗ್ಭ್ರಮೆಗಳು, ಉಂಟಾದವು. ಅವರು ಕಟ್ಟುನಿಟ್ಟಿನಿಂದ ಅದನ್ನು ಪಾಲಿಸುವ ರೀತಿ ಇವೆಲ್ಲಕ್ಕೂ ಲಿಂಗಮ್ಮ ಉತ್ತಮ ದಾಖಲೆಯಾಗಿದ್ದಾರೆ

ಲಿಂಗಮ್ಮನವರ ವಚನಭಾಷೆ ತತ್ವ ನಿರೂಪಣೆಯಲ್ಲಿ ಬೆಡಿಗಿನಿಂದ ಕೂಡಿದ್ದರೆ, ಟೀಕಿಸುವಲ್ಲಿ ಸರಳ, ದೇಶಿ ಸೊಗಡಿನಿಂದ ಸಂಭ್ರಮಿಸಿದ್ದಾರೆ. ಅವರ ವಚನಗಳಲ್ಲಿ ಉಪಮೆ, ರೂಪಕ, ಶಬ್ದಚಿತ್ರ, ಉಕ್ತಿ, ಗಾದೆಗಳನ್ನು ಒಳಗೊಂಡಿವೆ.

ಡಾ. ಎಮ್. ಮಕ್ತುಂಬಿ,
ಅಧ್ಯಕ್ಷರು,
ಶಬನಮ್‌ ಎಜ್ಯುಕೇಶನ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ (ರಿ).
ಭಾಲ್ಕಿ, ಬೀದರ ಜಿಲ್ಲೆ.
ಮೋಬೈಲ್‌ ನಂ. 92420 56469

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Leave a Reply