ಅನ್ನಭೇದ-ಪಂಕ್ತಿಭೇದದ ಕ್ರೌರ್ಯಾಸಹ್ಯಕ್ಕೆ ಸಮಾನತೆಯ ಸೂತ್ರ / ಡಾ. ಬಸವರಾಜ ಸಾದರ, ಬೆಂಗಳೂರು.
ಉಚ್ಚವರ್ಣದವರ ಊಟದ ಪಂಕ್ತಿಯಲ್ಲಿ ಕುಳಿತ ಶೂದ್ರ ವ್ಯಕ್ತಿಗಳನ್ನು ಅಲ್ಲಿಂದ ಎಬ್ಬಿಸಿ ಹೊರಗಟ್ಟಿದ ಹಲವಾರು ಘಟನೆಗಳು ನಮ್ಮಲ್ಲಿ ವರದಿಯಾಗಿದೆ. ಸೆಕ್ಯೂಲರ್ ಪ್ರಜಾಪ್ರಭುತ್ವದ ಕಾನೂನುಗಳನ್ನು ತುಳಿದಿಕ್ಕಿ, ಜಾತ್ಯಹಂಕಾರವನ್ನೇ ಮೆರೆಸುವ ವರ್ಣವ್ಯವಸ್ಥೆ ಜೀವಂತವಿರುವಲ್ಲಿ ಇವು ಮೊದಲನೆಯ ಘಟನೆಗಳೇನೂ ಅಲ್ಲ; ಕೊನೆಯವೂ ಆಗಲಿಕ್ಕಿಲ್ಲ. ಪಂಕ್ತಿ ಮತ್ತು ಊಟಕ್ಕೆ ಮಾತ್ರ ಸೀಮಿತವಾಗದ ಹಾಗೂ ಇಡೀ ಶೂದ್ರವರ್ಗವನ್ನು ಹಲವು ಬಗೆಗಳಲ್ಲಿ ಶೋಷಿಸುತ್ತ ಬಂದಿರುವ ಈ ಮಾನವ ಕ್ರೌರ್ಯವು ಪಶು-ಪಕ್ಷಿ ಸಂಕುಲದಲ್ಲಿಯೂ ಇಲ್ಲ. ತಳವರ್ಗಗಳ ಅಸ್ತಿತ್ವ ಮತ್ತು ಅಸ್ಮಿತೆಯನ್ನೇ ಮಣ್ಣು ಮಾಡುತ್ತಿರುವ ಇಂಥ ಅಸ್ಪೃಶ್ಯತೆಯಾಚರಣೆ ಭರತ ಭೂಮಿಗಂಟಿದ ಮಹಾ ಕೊಳೆ. ಅನ್ಯಾಯ-ಅಸಮಾನತೆ-ಅಸ್ಪೃಶ್ಯತೆಯನ್ನು ನಿಯಂತ್ರಿಸಲೆಂದೇ ಕಠಿಣ ಕಾನೂನುಗಳು ಜಾರಿಯಿರುವ…