ಶ್ರಾವಣ ವಚನ ಚಿಂತನ-08: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಜಲದೊಳಗಿರ್ದು ಕಿಚ್ಚು ಜಲವ ಸುಡದೆ,ಜಲವು ತಾನಾಗಿಯೇ ಇದ್ದಿತ್ತು ನೋಡಾ,ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ.ಕುಲದೊಳಗಿರ್ದು ಕುಲವ ಬೆರೆಸದೆ, ನೆಲೆಗೆಟ್ಟುನಿಂದುದನಾರು ಬಲ್ಲರೋ?ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,ಗುಹೇಶ್ವರಾ ನಿಮ್ಮ ನಿಲವು ನೋಡಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-138 / ವಚನ ಸಂಖ್ಯೆ-3) ದೇವನ ಇರವನ್ನು ಕುರಿತು ಶರಣರು ಮಾಡಿದ ಚಿಂತನೆ ಅದ್ಭುತವಾದುದು. ಅವನು ಎಲ್ಲೆಡೆಯೂ ಇದ್ದರೂ ಅವನ ಇರುವಿಕೆ ನಮ್ಮ ಸಾಮಾನ್ಯತೆಯ ಅರಿವಿಗೆ ಬರಲಾರದು. ವಿಶೇಷವಾದ ದೃಷ್ಟಿಕೋನ ಇದ್ದರೆ ಮಾತ್ರ ಅವನ ಅರಿವು ನಮಗೆ ಆಗಲು ಸಾಧ್ಯ. ಇದು ಒಂದು ರೀತಿಯಲ್ಲಿ ಹಾಲಿನಲ್ಲಿ ತುಪ್ಪ ಇರುವಂತೆ, ನೀರಿನಲ್ಲಿ ಬೆಂಕಿ…