ಒಂದೇ ಶರೀರದ ಇತ್ತಲೆಯಲ್ಲಿ ಒತ್ತಲೆಗೆ ವಿಷ ಹಾಕಿದರೆ? / ಡಾ. ಬಸವರಾಜ ಸಾದರ, ಬೆಂಗಳೂರು.
ಸಮಾಜವಾದ ಎಂಬ ಶಬ್ದವನ್ನು ಬಳಸದೆ, ಆ ಸಿದ್ಧಾಂತಕ್ಕೆ ಸಮರ್ಥ ಉದಾಹರಣೆಯಾಗಬಲ್ಲ, ಸಮತೆಯುಕ್ತ ಸಮಾಜದ ನಿರ್ಮಾಣಕ್ಕೆ ಮೊದಲು ಮಾಡಿದರು 12 ನೇಯ ಶತಮಾನದ ಶರಣರು. ಇದು ಚಾರಿತ್ರಿಕ ವಾಸ್ತವ. ಸರ್ವರ ಹಿತವನ್ನು ಸಮಾನ ನೆಲೆಯಲ್ಲಿ ಸಾಧಿಸ ಹೊರಟ ಅವರ ಕ್ರಿಯಾತ್ಮಕ ನಡೆ ಎಲ್ಲ ಕಾಲಕ್ಕೂ ಮಾದರಿಯಾಗುವಂಥದ್ದು. ‘ವ್ಯಕ್ತಿ ಹಿತದಲ್ಲಿಯೇ ಸಮಾಜದ ಹಿತವಿದೆ’ ಎಂಬ ಪ್ರಾಯೋಗಿಕ ಸಿದ್ಧಾಂತವನ್ನು ಅನುಸರಿಸುವುದರ ಜೊತೆಗೆ, ಏಕಕಾಲದಲ್ಲಿ ವ್ಯಕ್ತಿ ಮತ್ತು ಸಮುದಾಯ ಎರಡರ ಹಿತವನ್ನೂ ಸಾಧಿಸ ಹೊರಟ ಅವರ ಒಟ್ಟು ಉದ್ದೇಶ ‘ಸಕಲಜೀವಾತ್ಮರ ಲೇಸನ್ನೇ ಬಯಸು’ ವುದಾಗಿತ್ತು. 20 ನೇಯ ಶತಮಾನದಲ್ಲಿ ಇದನ್ನೇ ಗಾಂಧೀಜೀಯವರ ‘ಸರ್ವೋದಯ’…