ಶ್ರಾವಣ ವಚನ ಚಿಂತನ-12: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಶಿಲೆಯೊಳಗಣ ಪಾವಕನಂತೆ,ಉದಕದೊಳಗಣ ಪ್ರತಿಬಿಂಬದಂತೆ,ಬೀಜದೊಳಗಣ ವೃಕ್ಷದಂತೆ,ಶಬ್ದದೊಳಗಣ ನಿಶ್ಶಬ್ದದಂತೆ,ಗುಹೇಶ್ವರಾ ನಿಮ್ಮ ಶರಣ-ಸಂಬಂಧ.(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-7 / ವಚನ ಸಂಖ್ಯೆ-1) ಶರಣರ ಪ್ರಕಾರ ಅಂಗವೇ ಲಿಂಗದ ಆಶ್ರಯ ತಾಣ. ಅದು ಲಿಂಗಕ್ಕೆ ಆಧಾರವಾದುದು. ಅಂಗ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಅಂಗವಿರದಿದ್ದರೆ ಲಿಂಗಕ್ಕೆ ಆಸರೆ ಇಲ್ಲ. ಅಂಗ ಮತ್ತು ಲಿಂಗದ ಸಂಬಂಧವನ್ನು ಕುರಿತಂತೆ ಹಿರಿಯ ವಿದ್ವಾಂಸರಾದ ಶ್ರೀಮತಿ ಜಯಾ ರಾಜಶೇಖರ್ ಅವರು: "ಶಿವತತ್ವವನ್ನು ಗುಪ್ತವಾಗಿರಿಸಿಕೊಂಡ ನೆಲೆ ಅಂಗ. ಅಂಗವನ್ನು ಆಶ್ರಯಿಸಿ ಆತ್ಮವು ಸಾಧನ ಮಾರ್ಗದಲ್ಲಿ ಸಾಗಬೇಕು. ಅಂಗವೇ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುವ ತಾಯಿ. ಅಂಗದ ಆಧಾರದಿಂದಲೇ ಶಿವತತ್ವದ…